ಬುಧವಾರ, ಏಪ್ರಿಲ್ 22, 2020

ನೀಲನಭವನು ಸೀಳಿ ಬರುವ
ಮಿಂಚು ಸಿಡಿಲುಗಳೆಲ್ಲ
ದಗೆಯೆದ್ದಿಹ ಮನವನು
ತಣಿಸ ಬಲ್ಲದೇನು
ಒಲವೊಡೆದ ಹೃದಯವನು
ಸನಿಹದಲಿ ಪುಟಿದೇಳುವ
ನಗೆಬುಗ್ಗೆಯೊಂದು
ಜೋಡಿಸಬಹುದೇನು

ಮಣ್ಣಹೀರಿ ನೀರ ಕುಡಿಯುತಿವೆ
ರವಿ ಕಿರಣಗಳು ಕಾಣದಂತೆ
ಕರಗುತಿದೆ ಭುವಿಯು
ಮತ್ತೆ ನಗುವ ಭರವಸೆಯಲಿ
ನನ್ನ ಮೀರಿ ಮಿಡಿಯುತಿವೆ
ನೆನಪುಗಳೆಲ್ಲ ನೆರೆಯಂತೆ
ಒಣಗಿರುವ ಬದುಕ ಬಯಕೆ
ಸುತ್ತಗೆ ಹನಿದಿದೆ ನಿನ್ನಾಸರೆಯಲಿ

ಮೊದಲ ಮಳೆಯಂತೆ ಜಾರದಿರಲಿ
ಹಸಿರ ತುಂಬುವ ಬಸಿರ ಚಿಗುರು
ಪ್ರೀತಿ ಪರಿಸರವನು ನಾಳೆಗಾಗಿ
ನಮಗಾಗಿ ಬೆಳೆಸುತಿರಲಿ
ತೊದಲ ಸವಿಯ ಮಾತುಗಳಿರಲಿ
ಎದೆಗಪ್ಪಿದ ಸಲುಗೆಯ ಜೀವದುಸಿರು
ನಮ್ಮ ನಗುವ ಬೆಳದಿಂಗಳಾಗಿ
ಈ ಬದುಕ ಬೆಸೆಯುತಿರಲಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ