ಭಾನುವಾರ, ಜನವರಿ 26, 2020

ಶಾಲೆಯಂಗಳದಿ ಮುಂಜಾವಿಗೆ 
ಏರುತಿಹುದೆಮ್ಮೆಯ ಬಾಹುಟ 
ಪುಟ್ಟ ಪುಟ್ಟ ಹೃದಯದಲಿ
ತುಂಬಿ ದೇಶದೊಲುಮೆಯ||೨||

ಗಗನದೆತ್ತೆತ್ತರಕ್ಕೆ ಒಯ್ಯುತ್ತಿದೆ
ನಮ್ಮೆಲ್ಲರ ಕನಸುಗಳನು
ನನಸಾಗಿಸಲು ನಾವಿಂದು
ಮಾಡೋಣ ನಿಜದ ಸಂಕಲ್ಪ ..

ಧರ್ಮ,ಜಾತಿ,ಮತಗಳು
ಭಾಷೆ, ಪ್ರಾಂತ ಮಿತಿಗಳ
ದಾಟಿ ಕಟ್ಟಿದ ರಾಷ್ಟ್ರದಲಿ
ಸಮರಸ ಭಾವ ಚೆಲ್ಲಿದೆ..

ಪರಮಾಧಿಕಾರವಿದು ನಮ್ಮದು
ಪೂರ್ಣ ಸ್ವತಂತ್ರ ಗಣರಾಜ್ಯ
ಏಕ ಸೂತ್ರ ಬಂಧವು
ನಮ್ಮೀ ಸಂವಿಧಾನವು..

ನೆನೆಯೋಣ ಮೆರೆಯೋಣ
ನಾಳೆಯ ಬರೆಯೋಣ
ಈ ಗುರು ಸಾನಿಧ್ಯದೊಳು
ನಮ್ಮ ಪ್ರೀತಿಯ ನೆಲದೊಳು..

ಭಾನುವಾರ, ಜನವರಿ 19, 2020

ನೀ ಕಾವ ಭರವಸೆ
ನನ್ನ ಜೊತೆಗಿರಲು
ತಲೆಬಾಗೆನು ಸೋಲಿಗೆ
ನನ್ನೊಳಗೆ ತುಂಬಿ
ಭವಿತವ್ಯದ ಕನಸನು
ದೇವರಾದೆನು ಪಾಲಿಗೆ..
ಓ ಗುರುವೆ
ನಿನ್ನ ಜ್ಞಾನದ ದೀವಿಗೆಯೊಳು
ನನ್ನ ಅಂಧಕಾರವನು
ಮನದಿಂದ ತೊಳೆದೆ
ನಿನ್ನನಾಲಗೆಯ ಪದಗಳೆಲ್ಲವ
ಆಲಿಸುವ ಮಗುವಾಗಿ
ಬಾಲ್ಯವನು ಕಳೆದೆ..

ಪ್ರತಿಗಳಿಗೆಯೊಳು ಎಡವಿದರು
ಅದುವೇ ಗುರುವೆಂದು
ಮರುಗಿ ಬೀಳದಿರೆಂದೆನು
ನಿನ್ನ ಅನುಭಾವವನು
ಭಾವದೊಳಗೆ ಬೆಸೆದು
ನನ್ನೊಳಗೆ ಚೈತನ್ಯವನು ತುಂಬಿದೆನು..
ಓ ಗುರುವೆ
ಏಕಾಂತದೊಳು ದುಡುಕಿನೊಳು
ನಿನ್ನನ್ನು ಸ್ಮರಿಸಲು
ಸಮಚಿತ್ತವನು ನೀಡು
ಸಂಕಷ್ಟಕ್ಕೆ ಧೈರ್ಯವೇ ನೀನಾಗು
ಆತ್ಮಕ್ಕೆ ಪ್ರೇರಣೆಯಾಗು
ನನ್ನೀ ಜೀವನವನು ಕಾಪಾಡು..

ಗುರುವಾರ, ಜನವರಿ 9, 2020

ಕಾಡುತಿವೆ ಮೌನವನು
ಕಡಲ ತೀರದ ಗಾಳಿ
ಕಿವಿಗಚ್ಚುತ ತನು ತಂಪಾಗಿಸುತಾ
ಮುಳುಗುತಿವೆ ಮನಸುಗಳು
ನೆನಪುಗಳ ಸುಳಿಯಲಿ
ಅಲೆಗಳಂತೆ ಅಲೆಮಾರಿ..

ಮತ್ತೆ ಸಂಭವವೇನೊ
ಮುನಿಸಿಲ್ಲದ ಜೀವನದ
ನೀರ ನಡಿಗೆ
ನಿನ್ನ ಮನದ ಗುಡಿಗೆ..

ಮೀಟುವ ವೀಣೆಯ ಸ್ವರವಿಲ್ಲ
ದಾಟುವ ಹೆಜ್ಜೆಯ ನೆನಪಿಲ್ಲ
ಹಸಿಯಾಗಿದೆ ಮರಳು ಮರುಳು
ಕೂಗಿ ಕರೆದರೂ ಕೇಳದಂತೆ
ಗರಿಗೆದರಿದೆ ಬೆವರಿಳಿಸಿದೆ
ಪಶ್ಚಿಮದ ತಂಗಾಳಿ..

ಮತ್ತೆ ಸಂಭವವೇನೂ 
ಮುನಿಸಿಲ್ಲದ ಜೀವನದ
ನೀರ ನಡಿಗೆ
ನಿನ್ನ ಮನದ ಗುಡಿಗೆ..

ಪ್ರೀತಿ ತುಂಬಿರಲು ಒಂದೇ ದಿಕ್ಕು
ರೀತಿ ನೀತಿ ಬೇರೆಯದೆ ಬದುಕು
ಕಾಣದಂತಹ ನೋವುಗಳನು
ಮೊದಲೆ ಊಹಿಸಲಾರರೇನು
ಅರ್ಥ ಮಾಡದ ಸಪ್ತಪದಿಯು
ಸುಪ್ತ ದಿಕ್ಕಿನಲ್ಲಿ ಚಲಿಸದೇನು

ಮತ್ತೆ ಸಂಭವವೇನೂ 
ಮುನಿಸಿಲ್ಲದ ಜೀವನದ
ನೀರ ನಡಿಗೆ
ನಿನ್ನ ಮನದ ಗುಡಿಗೆ..

ಭಾನುವಾರ, ಜನವರಿ 5, 2020

ಆತ್ಮ ಪರಮಾತ್ಮನಲ್ಲಿ ಲೀನ
ಸಕಲವು ನಿನ್ನಲ್ಲೆ ತಲ್ಲೀನ
ನೀ ನಡೆದ ದಾರಿಯಲಿ
ತತ್ವ ಪ್ರತಿಪಾದನೆಯಲಿ
ಬೆಳಕಿವುದು ಮನುಕುಲಕೆ
ಮೌಢ್ಯವನು ಬದಿಗೊತ್ತಿ
ಧರ್ಮವನು ಹಿಡಿದಪ್ಪಿ
ಮಾತೃತ್ವವನು ಸಾರಿದೆ
ಶಿವನಾಗು ಭಗವಂತನಾಗು
ಮೋಕ್ಷಕ್ಕೆ ಶ್ರೀ ಕೃಷ್ಣನಾಗು
ಓ ಗುರುವೇ..
ಮತ ಹಿತಗಳೊಳಗೆ
ಅಹಿತಗಳನುಡುಕುತ
ಮಿತವಾಗಿ ತುಂಬುವ
ವಿಷ ಜಂತುಗಳಿವೆ
ನಮ್ಮೊಳಗೆ..

ದೇಶ ಸರ್ವರಿತ ಬಲ್ಲ 
ಸಂವಿಧಾನವನು 
ಒಮ್ಮೆ ತೆಗಳುತ
ಮತ್ತೊಮ್ಮೆ ಹೊಗಳುತ
ತಮ್ಮ ನೇರಕ್ಕೆ ನುಡಿವವರು..

ವೇದಿಕೆಯ ಮೇಲತ್ತಿ
ಕೈಯ ಮೇಲೆತ್ತಿ
ಬಿಗಿವರು ಭಾಷಣವನು
ಉರಿಸಿ ದ್ವೇಷವನು
ಮತ್ತೆ ಸಿಗಲಾರರು..

ಮನುಜ ಮತವನು
ಮರೆತ ತನುವಿದು
ಸುಡುವ ಅಸ್ಮಿತೆಯೊಳು
ಕರಗುತ್ತಿರುವರು
ಸಾವಿರಾರು ಜನರು...

ಪೃಥ್ವಿರಾಜ್ ಗಂಗೋತ್ರಿ