ಭಾನುವಾರ, ನವೆಂಬರ್ 13, 2022

ನೀಲ ಕೇಶವನು ಬಾಚಿ

ಮಲ್ಲಿಗೆಯ ಮುಡಿದು

ಸಿಂಗರಿಸಿ ಕುಳಿತೆ ಏಕೆ

ನೀಲಾಂಬರಿ ನೀ..

ತಿಳಿನೀರ ಕೆರೆಯಲಿ 

ನಿನ್ನ ಸೌಂದರ್ಯವನು

ನೀಲಕಾಶದೊಡೆಯ ರವಿ

ಮಾತ್ರ ಸವಿಯುವನೇನೆ..


ಚಹರೆಯೊಳು ಸಿಂಧೂರ

ಗಂಭೀರದಾಲೋಚನೆ 

ಬಿಂದಿಗೆಯೊಳು ನೀರ

ತುಂಬಿದೆಯಲ್ಲೇ

ಶೃಂಗಾರ ಭಾವದೊಳು

ಎನ್ನ ಸೂರೆಗೈವ

ನಿನ್ನ ಮುಂಗುರಳ

ಸರಿಸಿ ನೋಡಬಾರದೇಕೆ..


ನೀಲ ಕಂಗುತೆಂಗುಗಳ 

ಬಿಳಿಸೀರೆ ಸರಿದು 

ಮುಂಜಾವ ಕಿರಣದಂತೊಳೆವ 

ಕಾಂತಿಯ ಚೆಲುವೆ

ಕನಸ ಜೋಳಿಗೆಯ ತುಂಬಿ 

ಕೈ ಹಿಡಿದು ನಡೆಯೋಣ

ಬಾ ಎನ್ನ ಬಾಳಿಗೆ

ಓ ಚೆಂದ ಬಾಲಿಕೆಯೆ...



ಹೊಸ ಭಾಂದವ್ಯಕ್ಕೆ
ಮುನ್ನುಡಿಯನ್ನು ಬರೆಯೋಣ||೨||
ನಲಿ-ಕಲಿ ಜತೆಯಲಿ
ಮುಂದಡಿಯನ್ನು ಹಾಕೋಣ||೨||

ತನುಮನ ಶುಚಿಯಾಗಿಡಲು
ಚಿಗುರುವ ಮನಸಿಗೆ
ಬದುಕಿನ ಮೌಲ್ಯವ
ಅರಳಿಸೋ ವಿದ್ಯೆಯ ಕಲಿಸೋಣ||೧||
ಪರಿಸರ ನಂದನವನವಾಗಿಸಲು
ಸ್ವಚ್ಛತೆ ಅನುಭವ ಪಾಠವ ಮಾಡಿ
ಹೂವಿನ ಮನಸುಗಳಲ್ಲಿ 
ಪರಿಸರ ಸೂಕ್ಷ್ಮತೆ ಪಸರಿಸೋಣ ||೧||

ಸಾಹಸ ಮೆರೆದಿಹ ಇತಿಹಾಸ
ಚೆಲುವಿನ ತಾಯಿ ನುಡಿ ಕನ್ನಡ
ಸಮರಸ ಬಾಳ್ವೆಯ ಬೆಳಕುಗಳು 
ನಾಳೆಯ ಬದುಕಿನ ಸೋಪಾನ ||೧||
ಬಣ್ಣದ ಮಾತಿನ ಮರ್ಮಗಳು 
ಮನುಕುಲ ಕಲಕುವ ದ್ವೇಷಗಳು
ದೇಶವ ಸುಡುವ ಕವಲುಗಳು
ಎನ್ನುವ ಸತ್ಯವ ಪಠಿಸೋಣ ||೧||

ಮನೆಮನ ಬೆಸೆಯುವ ಬಂಧವನು 
ತುಂಬುವ ಮುದ್ದಿನ ನಗುವಾಗು 
ಬೋಧನೆಗೈಯುವ ಗುರುಗಳಿಗೆ
ವಿನಯದಿ ವಂದಿಸೋ ಮಗುವಾಗು ||೧||
ನಿನ್ನೊಳು ಉದಿಸುವ ನೋವಿಗೆ 
ಜ್ಞಾನದ ಜ್ಯೋತಿಯೆ ಸಾಂತ್ವನ
ಎನ್ನುತ ಮಕ್ಕಳ ಬೆಳೆಸೋಣ
ಭವಿತವ್ಯಕ್ಕೆ ಕನ್ನಡಿ ಹಿಡಿಯೋಣ ||೧||