ಸಾಹ್ಯಾದ್ರಿ ಒಡಲಿದು ನಮ್ಮ ಪಶ್ಚಿಮದ ತಪ್ಪಲು
ಕರಾವಳಿ ಬಾಗಿಲದು ಬೆಟ್ಟ ಗುಡ್ಡಗಳ ಸಾಲು
ದೂರದಲಿ ತೇಲುತಿಹ ಇಳಿಸಂಜೆಯ ಆ ರವಿಯು
ನೋಡುತಲಿ ಮುಳುಗಿದನು ನಾಳೆಯ ಈ ಕವಿಯು
ನಡುವೆ ಬೀಳುವ ಮಳೆ ಕ್ಷಣದೊಳೆನ್ನನು ತಣಿಸೇ
ಹಕ್ಕಿರಾಶಿಯ ಕೂಗು ತೆರೆಮರೆಗಳಲಿ ದ್ವನಿಸೇ
ಹಸಿರಾಯಿತು ಇಳೆ ಮರ ತರಗೆಲೆಗಳೆಲ್ಲವು ಜಾರುತ
ಬೀಸುತಿಹ ಮೈಯ ಸವರುವ ತಂಪಿನ ಮಾರುತ
ಶಿಖರವೆಲ್ಲವು ಹಿಮದೊಳು ಅಡಿಗಿವುದೇಕೆನುತಾ
ಮೌನ ಮಾತುಗಳು ಮನದೊಳಗೆ ಜಿನುಗುತ
ಹಾಲಾಭೀಷೇಕದಂತಿಹ ನೀರ ಧಾರೆಯ ಹರಿವು
ಪರಿಶುದ್ಧಗೊಳಿಸುತಿವೆ ಜೀವ ಕಲ್ಮಶ ದಾರಿಯ
ಮತ್ತೆ ಬದುಕಿರಲಿ ಈ ಕರುನಾಡ ಗುಡಿಯೊಳಗೆ
ಭಾರ್ಗವ ನಾಚುತ ಜಾರುವ ಕಡಲ ತಡಿಯೊಳಗೆ
ಭೋರ್ಗರೆಯುತ ನಗ್ಗುವ ಜಲಪಾತ ಬನದೊಳಗೆ
ನೋಡುವಂತಹ ಪುಳಕವು ಈ ತನುಮನದೊಳಗೆ