ಭಾನುವಾರ, ಮೇ 13, 2018

ಜಾರಿ ಹೋಗುವ ಮುನ್ನ

ಹೊಳೆವ ಕಂಗಳಿಂದು
ಹೊಳಪ ಕಳೆದುಕೊಂಡು
ಪ್ರೀತಿಯಿಂದ ಬೆರೆವ ಹೃದಯ
ಬೆಸೆದ ಬೆರಳ ಕಳಚಿಕೊಂಡು
ಒಂಟಿಯಾಗಿ ನಡೆದಿದೆ
ಮರಳ ಮೇಲೆ
ಮರುಳ ದಿಬ್ಬಣ
ಮರೆತು ಮುಂದೆ ಸಾಗಿದೆ

ಒಲವ ಅರ್ಥ ನಲಿವ ಮಾತು
ಮನಸಿನಿಂದ ಜಾರಿದೆ
ಛಲವು ಬಿಡದ ನೋವಿನಿಂದ
ಕಣ್ಣ ತುಂಬ ನೀರಿದೆ
ಬದುಕು ನೀನು ಸುಖಕೆ ಮಾತ್ರ
ಕಷ್ಟ ಯಾರಿಗೆ ಬೇಕಿದೆ
ಪ್ರೀತಿ ಒಲುಮೆ ನೆಪಕೆ ಬಂದು
ನಿನ್ನ ಸಂಗಂಡ ನಿಂತಿದೆ

ನೂರು ಕನಸಿನ ಎರಡು ಜೀವ
ಹಲವು ದಿನಗಳ ಮಧುರ ಮಾಯೆ
ನಿನ್ನ ಮುಂದೆಯೆ ಸುಡುತಿವೆ
ಪ್ರವಾಹದಂತೆ ಎಗರಿದೆ

ಸೋಮವಾರ, ಮೇ 7, 2018

ಪ್ರಜಾಪ್ರಭುತ್ವ

ಬದುಕಿಗಾಗಿ ನನ್ನಾಧಿಕಾರವನು
ನಿನಗೆ ಅರ್ಪಿಸುವೆನು
ರಕ್ಷಣೆ ಸಮರ್ಪಣೆ ನೀ
ಮಾಡುವೆನೆಂದು
ಹೇಳಿರುವರು ತಾತ್ವಿಕರು
ಹಕ್ಕುಗಳ ರಾಶಿಯದು
ಸೇರಿದ ಪ್ರಭುತ್ವವಿದು

ಕಾವವನು ಅಧಿಕಾರವನು
ಸಮಾಜದ ಏಳಿಗೆಗಾಗಿ
ರಾಜ್ಯದ ಕಲ್ಯಾಣಕ್ಕಾಗಿ
ಮೀಸಲಿಡುವವನಾಗಿ
ನಮಗೊಳಿತು ಸರಿ ನಡೆಗೆ
ನಮಗಳಿವು ಅರಿ ದ್ವೇಷಕ್ಕೆ
ಕಷ್ಟ ನಷ್ಟದಲಿ ಬಂದು
ಬಂಧುವಾಗು ದೊರೆಯೆ

ಸಮಾಜದ ನಲಿವಿನಲಿ
ನಮ್ಮ ಸಂಸಾರದಲ್ಲಿ
ನಮ್ಮವನಾಗಿ ಯೋಚಿಸು
ಅನಿವಾರ್ಯಕ್ಕೆ ಯೋಜಿಸು
ಕೆಡುಕಿರಲು ಜನರಲ್ಲಿ
ಮೂಢನಂಬಿಕೆ ಮರಳಿ
ಸಂಹರಿಸು ಕಾಯ್ದೆಯಲಿ
ದೇಶದೋಷವ ಕಳೆಯಲು

ಹಣ ಚೆಲ್ಲಿ ಯಾಚಿಸದಿರು
ಮತ ಬೇಟೆಯಲ್ಲವದು
ದ್ವೇಷ ಭಾವದ
ಡೊಂಬರಾಟವು ಸಲ್ಲದು
ಸಹಕಾರ ಸಂಬಂಧ
ಅಭಿವೃದ್ಧಿ ಅಭಿಪ್ರಾಯ
ಸರ್ವರ ಶಕ್ತಿಯದು
ನೀ ಪ್ರತಿನಿಧಿಯಾಗುವುದು