ಬುಧವಾರ, ಡಿಸೆಂಬರ್ 15, 2021

ನಿನ್ನಾ ಅವನತಿಯ
ನೀ ಕರೆದಂತೆ
ಬಾಸವಾಗುತಿದೆ..
ಒಳಗಣ್ಣ ರೆಪ್ಪೆಗಳ
ತೆರೆದೆನ್ನ ನೋಡು
ನಾಶವಾಗುತಿಹೆ ನೀನು..

ಮರವಲ್ಲ ನಾನು
ಬೆಟ್ಟ ಗುಡ್ಡವಲ್ಲ
ನಾನು ಕುರೂಪ
ಪ್ರಕೃತಿಯ ವಿಕೃತ ರೂಪ
ನಿನ್ನ ಬಾಹುಗಳೆಲ್ಲವು
ಜೇಡರ ಬಲೆಯಂತೆ
ಮುತ್ತಿವುದೆನ್ನನು..

ಕೂಗು ಜೋರಾಗಿ
ಮೆತ್ತಗಾಗುವವರೆಗೆ
ನಿನ್ನ ಧನಿಯು
ಕಿರುಚಾಟ ನರಲಾಟಕಿಲ್ಲ
ಅವಮಾನ
ಮೌನದೊಳಿರುವುದೆಲ್ಲವು

ನಾನಾರೆಂದು ಮತ್ತೆ
ಕೇಳದಿರು 
ಈ ಧರಿತ್ರಿಯಲಿ
ನನ್ನೊಡಲ ಅಗ್ನಿಯಲಿ
ನಿನ್ನ ಸಂತಾನವೆಲ್ಲವು
ದಹಿಸಿಕೊಳ್ಳಲು..

ಶುಕ್ರವಾರ, ಡಿಸೆಂಬರ್ 3, 2021

ಮಾರಿ ಮಾರಿ ಎಂದು 

ಮನೆಯಲ್ಲಿದ್ದರೆ

ಆಗುತ್ತೇವೆ ಸೋಮಾರಿ

ಬದುಕಲು ಬೇಕಲ್ಲವೆ

ಏನಾದರೊ ಮಾರಿ

ನಾವುಗಳು ಅಲೆಮಾರಿ


ಆಳುವವರು ದೊಡ್ಡವರು

ಅಳುವವರು ದಡ್ಡರೆಂದವರು

ರಕ್ತವನ್ನೆಲ್ಲ ಹೀರಿ ಹೀರಿ

ಪ್ರಕೃತಿಯ ಶಿರವೇರಿ

ಬೆಳೆದಾಗ ಬಿಡುವುದೇ

ಆಸೆಗಳ ಹೆಮ್ಮಾರಿ


ಹಸಿವ ಉರಿ ತಡೆಯುತ್ತಾ

ಬೆತ್ತಲೆ ಪಾದ ಬಿಸಿಲನೇರಿ

ಊರಿನ ಕಡೆಯ ದಾರಿ

ಬೀಳುತ್ತಾ ಹೊರಳುತ್ತಾ

ಹೋಗುತ್ತಿದೆ ಬೆವರ ಸವರಿ

ಪ್ರಾಣ ಪಕ್ಷಿಯು ಹಾರಿ


ಒಂದಲ್ಲ ಹಲವು ದಿನ

ನೆನಪಿಸು ಸೋಮಾರಿ

ದಕ್ಕಿದ ಬದುಕನೇರಿ

ನಾನು ನೀನಾಗಲೇ ಇಲ್ಲ

ಹಸಿವು ಹುಡುಕಾಟ ನಿಲ್ಲಲಿಲ್ಲ

ಇಬ್ಬರನ್ನು ಬಿಡಲಿಲ್ಲ ಈ  ಮಹಾಮಾರಿ

ಗುರುವಾರ, ಆಗಸ್ಟ್ 26, 2021

ಕುಟ್ಟಿ ಪುಡಿ ಮಾಡುತಿಹರು
ಕಟ್ಟಿದ ಕಾನೂನುಗಳ
ಮತ್ತೆ ಗಟ್ಟಿ ಕಟ್ಟುವೆನೆನ್ನುವರು
ಹಾಗದರೆ ಬಿಗಿದಿದ್ದ ಸಾಲುಗಳು
ಹಗುರವಾದುವು ಏಕೆ..!?
ಮತ್ತೆ ಮತ್ತೆ ಸಡಿಲವಾಗುವುದೇಕೆ..!?
ನೀವು ಬಿಗಿಯಾಗದಿರೆ
ಕಾರ್ಯ ಚುರುಕಾಗದಿರೆ
ತತ್ವವೇ ತಾನಗಿ ಕಾನೂನು ಅರಿವಾಗದಿರೆ
ಮತ್ತೆ ಕಟ್ಟಿದರೂ ಬಿಗಿಯಾಗುವುದೇನು..!?
ಬಿಗಿಮಾಡು ನಿನ್ನ ಕಾರ್ಯವನು
ನಡೆದೆಲ್ಲವು ಉಳಿವುದೆಲ್ಲವು
ನಿನ್ನ ಸಾಧನೆಯೊಳು
ಮತ್ತೆ ಪುಡಿ ಮಡುವವರ ತವಕವು
ಕಾನೂನಿನ ಸರಪಳಿಯೊಳು
 ಭದ್ರವಾಗಿರುವುವು ನೋಡು..

ಮಂಗಳವಾರ, ಜೂನ್ 29, 2021

ಸಾಧಕನಾಗಲು ಹೊರಟಿರುವೆ ಹರಿಯೇ
ಬಾಧೆಗಳ ಕಳೆದು ವರವ ನೀ ಸುರಿಯೇ
ನನ್ನ ಕರ್ಮಗಳೆಲ್ಲ ನಿನ್ನ ಸೇವೆಗಾಗಿಡುವೆ
ಸಹಕರಿಸು ಆದಿಕೇಶವ

ಅವನಿವನು ಅವಳಿವಳು ಯಾರಿಲ್ಲ ನನಗೆ
ಅವನಿಯೊಳು ಜನಿಸಿದ ಒಂಟಿ ಜೀವವು ನಾನು
ನಿನ್ನ ಹೊರತು ನನಗಾರು ದಯೆತೋರುವರು
ಹೇಳೆನಗೆ ಮಧುಸೂದನ ಸಾಕೆನಗೆ ದಾರಿದ್ರ್ಯ ದಿನ

ಜೋಳಿಗೆಯ ಪಿಡಿದು ಮನೆಮನೆಗೆ ತೆರಳಿದೆನು
ನನ್ನ ನಾಲಗೆಯಲಿ ನಿನ್ನ ನಾಮವ ಕೇಳಿ ನಗುತಿಹರು 
ಹೊರಗೆಲ್ಲ ಅಬ್ಬರದಿ ನಿನ್ನೆಸರಲಿ ತಿಂದುಂಡು ಮಲಗಿಹರು
ಕೇಳಲಾರೆಯ ಮಾಧವ ತಾಳಲಾರನು ಈ ನೋವ




ಗುರುವಾರ, ಜೂನ್ 3, 2021


ಸಾಹ್ಯಾದ್ರಿ ಒಡಲಿದು ನಮ್ಮ ಪಶ್ಚಿಮದ ತಪ್ಪಲು
ಕರಾವಳಿ ಬಾಗಿಲದು ಬೆಟ್ಟ ಗುಡ್ಡಗಳ ಸಾಲು
ದೂರದಲಿ ತೇಲುತಿಹ ಇಳಿಸಂಜೆಯ ಆ ರವಿಯು
ನೋಡುತಲಿ ಮುಳುಗಿದನು ನಾಳೆಯ ಈ ಕವಿಯು

ನಡುವೆ ಬೀಳುವ ಮಳೆ ಕ್ಷಣದೊಳೆನ್ನನು ತಣಿಸೇ
ಹಕ್ಕಿರಾಶಿಯ ಕೂಗು ತೆರೆಮರೆಗಳಲಿ ದ್ವನಿಸೇ
ಹಸಿರಾಯಿತು ಇಳೆ ಮರ ತರಗೆಲೆಗಳೆಲ್ಲವು ಜಾರುತ
ಬೀಸುತಿಹ ಮೈಯ ಸವರುವ ತಂಪಿನ ಮಾರುತ

ಶಿಖರವೆಲ್ಲವು ಹಿಮದೊಳು ಅಡಿಗಿವುದೇಕೆನುತಾ
ಮೌನ ಮಾತುಗಳು ಮನದೊಳಗೆ ಜಿನುಗುತ
ಹಾಲಾಭೀಷೇಕದಂತಿಹ ನೀರ ಧಾರೆಯ ಹರಿವು
ಪರಿಶುದ್ಧಗೊಳಿಸುತಿವೆ ಜೀವ ಕಲ್ಮಶ ದಾರಿಯ

ಮತ್ತೆ ಬದುಕಿರಲಿ ಈ ಕರುನಾಡ ಗುಡಿಯೊಳಗೆ
ಭಾರ್ಗವ ನಾಚುತ ಜಾರುವ ಕಡಲ ತಡಿಯೊಳಗೆ
ಭೋರ್ಗರೆಯುತ ನಗ್ಗುವ ಜಲಪಾತ ಬನದೊಳಗೆ
ನೋಡುವಂತಹ ಪುಳಕವು ಈ ತನುಮನದೊಳಗೆ

ಬುಧವಾರ, ಮೇ 26, 2021

ಹರಿಯ ವರವಿರೆ 
ಸಹಸ್ರ ಬಾಹುಬಲನಿವ
ಅಧಿಕಾರ ಮದವನು 
ತಲೆಗೇರಿಸಿದವ
ಅಹಂಕಾರ ತುಂಬಿ
ಪರಶುವಿಗೆ ಶರಣಾದ..

ಹೆಸರಿಟ್ಟ ಕೂಡಲೇ 
ಅರ್ಜುನನಾಗಲಾರ
ಭುಜಬಲ ಮಾತ್ರದಿ
ಕ್ಷತ್ರಿಯನಾಗಲಾರ
ಮದತುಂಬಿದವನು
ಪ್ರಜಾಪತಿಯಾಗಲಾರ

ಶರಣಾಗು ಆತ್ಮೀಯರೊಳು
ವರವಾಗು ದೀನದಲಿತರೊಳು
ಮಗುವಾಗು ತಾಯ ಮಡಿಲೊಳು
ರಕ್ಷಕನಾಗು ರಾಕ್ಷಸ ಪ್ರವೃತ್ತಿಯೊಳು
ಯುಗ ನೆನೆವುದು ನಿನ್ನ
ಮಣ್ಣ ಸೇರಿದ ಕೊನೆಗೆ

ಭಾನುವಾರ, ಮೇ 16, 2021

ಈ ಮುಂಜಾವಿನ ಮಂಜಿನಲಿ
ಸೂರ್ಯ ಕಿರಣ ಸೋಕಲು
ಹಸಿರ ಎಲೆಯು ಬಾಗಿದೆ
ಹನಿಯ ಭಾರದಿ ಧರೆಯ ಸ್ಪರ್ಶಕ್ಕೆ
ಈ ಮಣ್ಣ ಕಣವು ಕಾದಿದೆ

ಪುಟ್ಟಿದಾ ಜೀವಗಳಿಗೊಂದು 
ಸಂಬಂಧ ಸರಪಳಿಯ ಹೆಸರಿದೆ
ಯವೌನ ಮುಪ್ಪು ಬದುಕ ಪಯಣ
ಬರುವ ಸಾವ ಕೊಂಡಿಯನು
ಈ ಮಣ್ಣ ಕಣವು ಕಾದಿದೆ

ಶುಕ್ರವಾರ, ಮೇ 14, 2021

ಇಲ್ಲಿ ಮಾಡಿದಾ ಕಾರ್ಯಗಳಿಗೊಂದು
ಫಲ ಅನುಭವಿಸುವುದಲ್ಲಿ
ವೇದ ವೇದಾಂತಿಗಳೆಂಬರು
ಆದರೆ ಬಸವ ನುಡಿದಂತೆ
ಇಹದ ಕರ್ಮಫಲ ಭಂಜಿಸುತಿಹುದೆನ್ನ
ಬಸವಳಿದ ಬದುಕನು ಈ ಜನ್ಮದಲಿ

ಭುವಿಯೊಡೆದು ತಿರುಳ ಬಗೆದವರ
ಆಕಾಶವನು ಕಾಯದಿಂದಲೆ ಮುಟ್ಟಿದ
ಮನ ತಟ್ಟದ ದೇಹವನ್ನೊಪ್ಪದ
ಅರ್ಥವಿಲ್ಲದ ಮನುಜ ದಾಹವನು
ಕ್ರಿಮಿಯನ್ನಿಟ್ಟು ಶಿವ ತಾನಾಡಿಸುತಿಹನು
ಸಂಗಮನೊಲಿಸುವ ಪರಿ ಮರೆತೆವಯ್ಯ

ನೆಪವಾಗುತಿಹೆ ನೀನು
ಅನುಭಾವವನು ದಿಕ್ಕರಿಸಿ ಸಮರ್ಥನೆಯನಪ್ಪಿ
ಸ್ವಾರ್ಥ ಭುಗಿಯಲಿ ಪಲ್ಲವಿಸಿ
ನಾಲಗೆಯ ಎಳೆವವರ ಬಂಧುವಂತೆ ನೀ
ರಾಜಕಾರಣಿಗಳ ಮತಗಳ ಮಮಕಾರವಂತೆ
ನೀ ತೊರೆದ ಐಶ್ವರ್ಯ ಮದದೊಳಗೆ
ನಿನ್ನ ತಮಗಾಗುವಂತೆ ಬನ್ನಿಪರಯ್ಯ

ನೆನಪಾಗುತಿಹೆ ನೀನು
ಜಾತಿ ಭಂಡರ ನೀತಿಯನುಟ್ಟ
ಧರ್ಮದಮಲಿನ ಭಯದಿ ಸುಡುವರ
ಅರಿಷಡ್ವರ್ಗದೊಳು ಹೊರಳಾಡುವ
ನರನಾಟಕವನು ಬಿಸುಟು
ಕೂಡಲ ಸಂಗದಲಿ ನಾನೂ ಇರಬೇಕಿತ್ತು

ಪೃಥ್ವಿರಾಜ್ ಜಿ

ಬುಧವಾರ, ಮೇ 5, 2021

ಸೇರುತಿಹುದೆಲ್ಲವು ನಿನ್ನೆದೆ..

ಮರದ ಬೇರಿನ ಋಣದ ಬೆವರಲಿ
ಹನಿವ ನೀರಿನ ಕಣದೊಳು
ಹಸಿರ ಬನದೊಳು ನಾಗನಡೆಯೊಳು
ಹರಿವ ತೊರೆಯು ನಿನ್ನದು
ಧುಮುಕಿ ನೆಗೆಯುವ ಹಾಲ ನಗೆಯು
ನಭಕ್ಕೆ ಚೆಲ್ಲುತ ತಂಪಿಡುತಿರೆ
ಕೃಷ್ಣ ಕೃಷ್ಣ ಕೃಷ್ಣ ಎನ್ನುತಿವೆ ಕಾಡೊಲು
ಭಜಿಸೆ ನಾಮವು ಪ್ರಾಣಿ ಸಂಕುಲದೊಳು

ತಾಳ್ಮೆ ಕಳೆದ ದೇಹದಾಹದಸಿವು
ಬಾಯರಿ ನಿನಗೆ ಸೋತು
ನಿನ್ನ ಭಕ್ತಿ ಅರಳಿಸಿವುದೆನ್ನೆದೆ
ಚಿಗುರಿದೊಲುಮೆಯ ಉಳುಮೆಗೈಯುತಾ
ನಿನ್ನತನದಿ ತೂಗಿದಾ ತೆನೆ
ಸೇರುತಿವುದೆಲ್ಲವು ನಿನ್ನೆದೆ
ಕೃಷ್ಣಾ... ಸೇರುತಿಹುದೆಲ್ಲವು ನಿನ್ನೆದೆ..
ಭೋರ್ಗರೆಯುತಿವೆ ವರುಣಾನಾರ್ಭಟವು 
ಹೊನಲು ಬೆಳಕಿನ ರಂಗಿನಾಟವು
ಸುರಿವ ಹನಿಗಳಿಗೆ ಹಸಿರು ಬಾಗಿಹವು
ಇಳೆಯ ಕೊಳೆಯನು ತೊಳೆದು ಸಾಗಿಹವು

ನಟಿಸೋ ಡೋಂಗಿ ನಾಯಕರ ಹಿಂಡಲಿ 
ಸ್ವಾರ್ಥದಾಸೆಯ ಹಸಿದು ಕಸಿದ ಜೇಬಲಿ 
ಹರಿವ ಮಳೆಯು ಉಳಿಸೋ ಹಸಿರು ವಸುಂಧರೆಯು 
ಮನುಜ ಮನಸ್ಸನು ತಣಿಸದಾದುವು

ಭಾನುವಾರ, ಫೆಬ್ರವರಿ 28, 2021

ಸೇರುತಿಹುದೆಲ್ಲವು ನಿನ್ನೆದೆ..

ಮರದ ಬೇರಿನ ಋಣದ ಬೆವರಲಿ
ಹನಿವ ನೀರಿನ ಕಣದೊಳು
ಹಸಿರ ಬನದೊಳು ನಾಗನಡೆಯೊಳು
ಹರಿವ ತೊರೆಯು ನಿನ್ನದು
ಧುಮುಕಿ ನೆಗೆಯುವ ಹಾಲ ನಗೆಯು
ನಭಕ್ಕೆ ಚೆಲ್ಲುತ ತಂಪಿಡುತಿರೆ
ಕೃಷ್ಣ ಕೃಷ್ಣ ಕೃಷ್ಣ ಎನ್ನುತಿವೆ ಕಾಡೊಲು
ಭಜಿಸೆ ನಾಮವು ಪ್ರಾಣಿ ಸಂಕುಲದೊಳು

ತಾಳ್ಮೆ ಕಳೆದ ದೇಹದಾಹದಸಿವು
ಬಾಯರಿ ನಿನಗೆ ಸೋತು
ನಿನ್ನ ಭಕ್ತಿ ಅರಳಿಸಿವುದೆನ್ನೆದೆ
ಚಿಗುರಿದೊಲುಮೆಯ ಉಳುಮೆಗೈಯುತಾ
ನಿನ್ನತನದಿ ತೂಗಿದಾ ತೆನೆ
ಸೇರುತಿವುದೆಲ್ಲವು ನಿನ್ನೆದೆ
ಕೃಷ್ಣಾ... ಸೇರುತಿಹುದೆಲ್ಲವು ನಿನ್ನೆದೆ..

ಭಾನುವಾರ, ಫೆಬ್ರವರಿ 21, 2021

ಕುಂಡದೊಳಗ್ನಿಗೆ ಸರ್ವ ಸಮರ್ಪಿಸಿ
ಹೋಮ ಹವನವ ಮಾಡಿದವಗೆ
ಅರಿಷಡ್ವರ್ಗಗಳ ಆಟಟೋಪವು
ಒಳಗೊಳಗೆ ಕುದಿಯುತಿರೆ
ಇನ್ನೇಗೆ ಸಿಗುವೆಯೋ ರಂಗಾ..

ಸತ್ಯ ಸಮರಸ ಬದುಕ ಬಳ್ಳಿಗೆ
ನಿತ್ಯ ವಿರಸದ ಸುಳ್ಳ ಕಟ್ಟುವ
ಜಾತಿ ಸಂಗದಿ ಬಂಧ ಹೊಂದುವ
ನರ ವ್ಯಾಮೋಹದೊಳಗಿರೆ..
ನಿನ್ನ ಕಾಣಬಲ್ಲನೆ ನರಹರಿಯೇ..

ಕಳ್ಳ ದಾರಿಯ ನೆಚ್ಚಿ ಬದುಕಿದವ
ಸ್ವರ್ಗದಾಸೆಯ ಬಯಸುತಿರೆ
ಒಳಹೊರದ ಅಂತರವು ಹೆಚ್ಚಿರೆ
ಉಳ್ಳ ಸತ್ವಶಕ್ತಿಯ ಕಳೆದು
ಬೆತ್ತಲಾಗನೇನು ಶ್ರೀ ಹರಿಯೇ

ಧರ್ಮವನು ಮೌಢ್ಯಗಳಿಂದ ಸ್ತುತಿಸಿ
ಅಂತರಂಗದೊಳು ಜಾಢ್ಯವನಪ್ಪಿ
ಗೀತ ಸಾರವನು ಅರಿಯದೆ
ಗಂಟೆ ಜಾಗಟೆ ಆರ್ಭಟ ಕಿವಿಗಚ್ಚುತಿರೆ
ಸುಮ್ಮನಾದೆಯಾ ಮುರ ಹರಿಯೇ..

ತೊಳಲಿ ಬಳಲಿದ ಬದುಕ ನೋವು
ಸೇರಿ ಸಾಗರವಾಗುತಿರೆ
ಹಸಿವು ತುಂಬಿದ ಜೀವದ
ಋಣವು ನಿನ್ನದಾಯಿತೆ ಕೃಷ್ಣ ...
ಋಣವು ನಿನ್ನದಾಯಿತೆ..

ಸೋಮವಾರ, ಜನವರಿ 4, 2021

ಆ ಕತ್ತಲು ಮಂದ ಬೆಳಕಿರೆ
ದಾರಿಯುದ್ದಕೂ
ಈ ಬೆತ್ತಲು ಮನಸ ಸುತ್ತಲು
ನಾರಿಯುದ್ದಕೂ
ತಾಳವು ಇಲ್ಲದೆ
ಮುರಿದಂತೆ ನಿಶ್ಯಬ್ದವು

ತಣಿದಿಹ ನೆಲದಲ್ಲಿ
ಮಣ್ಣಕಂಪು ಸೆಳೆದಾಗ
ಕನಸಾಗಿ ಮಳೆಯಾಗಿ
ಹಸಿರಾಗಲು ಉಸಿರೇರಲು
ಇಂಪಾಗಲು ತಂಪಾಗಲು
ಸುರಿದಂತೆ ಜತೆ ದೃಶ್ಯವು

ಭಾನುವಾರ, ಜನವರಿ 3, 2021

ಜಪತಪ ಹೋಮಗಳ ಮಾಡಿ
ನಿನ್ನ ಸೃಷ್ಟಿಯೊಳ ಭಿನ್ನಗಳಿಗಂಜಿ 
ಬೇದಭಾವ ಮಾಡುತಿರೆ
ದೇವನೊಳಿವನೆ ಹೇಳು
ನಿನ್ನ ಮಡಿಮೈಲಿಗೆಗೆ 
ದೂರ ನಿಲ್ಲಲಾರನೆ
ಜೀವನವನು ಸುಡುವ 
ಕಾಮಕ್ರೋದದೊಳಗೆ
ನಿನ್ನ ನಾಮವನು ಗೊಣಗುತಿರೆ
ಮಂತ್ರವಾಗುವುದೇ ಹೇಳು
ಹರಿಯೆ ನಿನ್ನ ಕಾಣಲು
ನವನವೀನ ಬದುಕಿನೊಳು
ಅರಿತು ಬೆರೆತು ಬದುಕುವ ಕಾಯ
ನೇಮ ಕರ್ಮಗಳೆಲ್ಲ
ಪ್ರಾಣ ಮಂತ್ರವಾಗುವುದು 
ಹರಿಯೆ ನಿನ್ನ ಕಾಣಲು