ಬುಧವಾರ, ಜುಲೈ 22, 2020

ಕೃಷ್ಣ ಕೃಷ್ಣ ಕೃಷ್ಣಾನೆನುತಾ..
ಬಂದರೆ ನೀ..
ಯಶೋಧೆಯಾಗುವೆನೇನೆ..
ದ್ವಾರಕಾಧೀಶ ದೀನರೊಳು
ಅಧೀನನಾಗಿರಲು
ಸಿಗುವನೇನೆ..
ತಾಯಿ ನಿನಗೆ ಸಿಗುವನೇನೆ..

ಕಿವಿಗಿಂಪಿಡುವ ಕಾನನದ
ಹಕ್ಕಿ ಧ್ವನಿಯೊಳು
ಬೆಟ್ಟದಾ ಝರಿಯಿಂದ
ಉದಿಸುವ ಶಬ್ದದೊಳು
ಹರಿನಾಮವನ್ನಾಡುವ 
ನಾಲಗೆಯ ರುಚಿಯೊಳು
ಅವನಿರುವನಲ್ಲದೆ..
ಹುಡುಕಿದರೆ ಸಿಗದವನು
ನಿನ್ನ ಮಗುವಿನ 
ನಗುವಿನಲ್ಲಿರುವನು ತಾಯಿ..
ಆ ಬಾಲಗೋಪಾಲ..
ನಿನ್ನ ಬಾಳ ಗೋಪಾಲ..

ನ್ಯಾಯ ಅನ್ಯಾಯಗಳ
ಮರ್ಮದೊಳಗೆ
ನೀ ಮಾಡುವ ದಾನಗಳ
ಕರ್ಮದೊಳಗೆ
ಸ್ವಾರ್ಥರಹಿತರು ಮಾಡಿದ
ರಾಜಧರ್ಮದೊಳಗೆ
ಅವನಿರುವನಲ್ಲದೆ..
ಕರಿಕಲ್ಲ ಉಳಿಯಿಂದ
ತೀಡಿದಾಗ ಇರದವನು
ನಿನ್ನಾತ್ಮದ ಅಂತರಂಗದ 
ಚೆಲುವು ಕಡಿದಾಗ
ಸುಂದರಾಂಗನು ತಾಯಿ..
ಆ ಪರಮಾತ್ಮನು..
ಚೆಲುವ ರಂಗನಾಥನು..

- ಪೃಥ್ವಿರಾಜ್ ಗಂಗೋತ್ರಿ..

ಸೋಮವಾರ, ಜುಲೈ 20, 2020

ಬೆಳೆವ ತವರು ಮನೆಯ
ಬೆಳದಿಂಗಳಾದೆ......
ಜೀವನ ಅರಿವ ಗಂಡನ ಮನೆಯ
ದೀಪವಾಗುತಿಹೆ...... ||೨||

ಹುಟ್ಟಿದ ಮನೆಯ ಬಿಟ್ಟು ಬಂದೆ 
ನೀ ಕಟ್ಟಿದ ಕನಸ ಕಾಣಬಂದೆ 
ಅರಿಶಿನ ಹಚ್ಚಿದ ಚೆಲುವಿನಲಿ 
ಹರಸಿದ ಕೈಗಳ ನಡುವಿನಲಿ 
ನೀ ತುಂಟತನಕೆ ಒಂಟಿಯಾದೆ...
ನೀ ಕುಂಟುನೆಪಗಳಿಗೆ ಜತೆಯಾದೆ...

ಎಡರು ತೊಡರುಗಳೆಲ್ಲ ಭೇದಿಸಿ
ನಿನ್ನ ಸಾಕಿದ ತಾಯಿತಂದೆ
ಸಿಹಿಕಹಿಗಳು ಏನೇ ಇರಲಿ 
ಬದುಕು ನೀನು ಇನ್ನುಮುಂದೆ
ಕೈ ಹಿಡಿದು ಸಾಗು ನೀನು...
ನಿನ್ನ ವರಿಸಿದ ಚೆಲುವನೆಂದು...

ಆಕಾಶವನು ನೋಡುತ ಎಣಿಸದಿರು
ದಿನ ಬೆಳಗುವ ರವಿ ನಿನ್ನವನೆನ್ನುತಿರು
ಹಾಲಿನಂತಾಗುವುದು ಬಾಳುವ ಬದುಕೆ
ಹುಳಿಯಿಂಡುವವರ ಭಯ ನಿನಗೇತಕೆ
ಸ್ವರ್ಗವಿವುದು ನಿನ್ನೊಲವಿನಲಿ ಸಂಸಾರದಲಿ
ಬಾಳಪುಟಗಳಲ್ಲಿ ಹೆಗ್ಗುರುತು ಮೂಡಲಿ
ನೊಗವ ಬಿಗಿದು ನೇಗಿಲ ಹಿಡಿದು
ಕೈಯ ಕೋಲು  ಬೀಗಿದ ದ್ವನಿಯು
ನೆಲವ ಸೀಳುತ ನೀ ನಡೆವ ಪಜ್ಜೆಗೆ 
ಸರಿಯುತಿವೆ ಹನಿದ ನೀರ ರಾಶಿ
ನಾಳೆಯ ಬದುಕ ಬಂಡಿಯಿದು
ಹೊನ್ನ ಬೆಳೆವ ಕೆಸರ ಗದ್ದೆಯಿದು