ಸೋಮವಾರ, ಆಗಸ್ಟ್ 27, 2018

ತತ್ವವಿಲ್ಲದ ಪ್ರೇಮ
ಹಸಿವಿನೊಳಗಿದೆ ಎಂಬ
ಶಿರಡಿಯೊಳಗಿನ ಕವಿತೆ
ಮತಾತೀತ ಧರ್ಮ
ಸಂಗೀತವೆಂದ
ಶಿಶುನಾಳ ಗೀತೆ
ಸೇವೆಯೆಂಬ
ಇಹದ ಪೂಜೆಗೆ
ಶಿವನೊಲಿವನೆಂದ
ವಚನಗಳ ಸಾರ
ಆದರೆ
ಮತ್ತೆ ಮತ್ತೆ ಲೆಕ್ಕ
ಹಾಕುತಿಹರು
ಭಕ್ತಿ ಸಮರ್ಪಣೆಗೆ
ಕೂಡಿಟ್ಟದರಲಿ
ಪಾಲು ನೀಡಿ
ಅಶುದ್ಧಗೊಳಿಪರೈ
ಇನ್ನು ಕೆಲವರು
ಭಕ್ತಿಯನ್ನಣಕಿಸಿ
ದೇವನಿಲ್ಲವೆಂಬಂತಿಹ
ಬಣ್ಣ ಧರಿಸಿ
ಹೊರ ನೆಲದ
ತತ್ವವೆಂಬರಯ್ಯಾ
ನಿಮ್ಮ ಜನ್ಮವು
ವ್ಯರ್ಥವಾಯಿತಲ್ಲವೆ
ಟೀಕೆ ಡೊಂಬರಾಟದಲಿ
ನಮ್ಮ ಮನೆಯ
ಮಾತಿನ ಸತ್ಯ
ತಿಳಿಯದಾದಿರಯ್ಯಾ..

ಭಾನುವಾರ, ಆಗಸ್ಟ್ 5, 2018

ನೀಲಿಯಾಕಾಶದಲ್ಲಿ
ಖಾಲಿಯಾಗದ ಮೋಡಗಳು
ನಭಕ್ಕೆ ಹೆಣೆಯುವ ಬಲೆಯಲ್ಲಿ
ಬಂದಿಯಾದ ನಾವುಗಳು
ಮೇಲೆ ಹಾರಲಾಗದೆ
ಕೆಳಗೆ ಇಳಿಯಲಾರದೆ
ಕೊಡುವ ಚಿತ್ರಕ್ಕೆ
ಕನಸ ಪತ್ರವು
ಮೇಲಿನಿಂದ ಬಿದ್ದಂತೆ
ಹಾಸಿಗೆ ಬಿಗಿದಿವೆ
ಬಾಹುಗಳೆರಡರಲಿ ಬಾಚುತ

ಕೆಸರಾಗುತಿವೆ ಗದ್ದೆಗಳೆಲ್ಲವು
ನೇಗಿಲೊಡೆದಿಹ ಮಣ್ಣಲಿ
ಹಸಿರಾಗಲು ನೆಲದೊಳು
ರೈತನೊಲವಿನ ಕಾಯಕ

ಹಸಿವ ತಣಿಸುವ ಮಂತ್ರವು
ಹೆಣೆದ ಉಲುಮೆಯ ತಂತ್ರವು
ನೀರನುಳಿಸುವ ಬದುವ ಕಟ್ಟುವ
ಬದುಕ ಕಟ್ಟಿದ ಸಂಸ್ಕೃತಿ..

ಬುಧವಾರ, ಆಗಸ್ಟ್ 1, 2018

ಸುರಿದಿರ್ದ ಮಳೆಹನಿಯ
ಲೆಕ್ಕಹಾಕೆಂಬರು
ಬರಗಾಲದ ಬಿಸಿಲ
ಡಿಗ್ರಿ ಸೆಕೆಯೆಂಬರು
ಪ್ರತಿಯೊಂದಕ್ಕೊಂದು
ಅಳತೆಯೆಂಬರು
ನಿನ್ನ ನಾಲಿಗೆಯ ನುಡಿ
ನಂಬರಯ್ಯ
ಬದುಕಿನಾಳವ ಎಂತೆಂದು
ಕೇಳರಯ್ಯ
ಸಾವ ಕೈಯಲ್ಲಿ ಪಿಡಿದು
ಬೊಬ್ಬಿಡುವರಯ್ಯ
ಪರಮಾತ್ಮನಳತೆಯಗೋಲು
ಈ ಜೀವ ಜೀವ..